ಚಿತ್ರದುರ್ಗ: ರಾಜ್ಯದಲ್ಲಿ ನಡೆಯುತ್ತಿರುವ ನಿಗೂಢ ಸಾವುಗಳು, ಸೌಜನ್ಯ ಕೊಲೆ ಪ್ರಕರಣದ ತನಿಖೆ ಹಾಗೂ ಹಲವು ಸಂಘಟನೆಗಳ ಚಟುವಟಿಕೆಗಳ ಕುರಿತು ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹಲವು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ.
ಪ್ರಶ್ನೆ ಮಾಡುವವರ ತೇಜೋವಧೆ: ಗಿರೀಶ್ ಆಕ್ರೋಶ
“ನಾವು ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಸತ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಆದರೆ, ಧ್ವನಿ ಎತ್ತುವವರ ಕುಟುಂಬದ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಂಡು ತೇಜೋವಧೆ ಮಾಡುವ ಕೆಟ್ಟ ಸಂಸ್ಕೃತಿ ರಾಜ್ಯದಲ್ಲಿ ಬೆಳೆಯುತ್ತಿದೆ,” ಎಂದು ಗಿರೀಶ್ ಮಟ್ಟಣ್ಣವರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯ ಅಕ್ರಮ ಮೀಟರ್ ಬಡ್ಡಿ ದಂಧೆಯ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಎದುರಿಸಬೇಕಾಯಿತು ಎಂದ ಅವರು, ಗೌರವಾನ್ವಿತ ಸಮಾಜ ಸೇವಕಿ ರಮಾ ನಾಗರಾಜ್ ಹಾಗೂ ಹಿರಿಯ ನಟ ಪ್ರಕಾಶ್ ರಾಜ್ ಅವರ ಹೆಸರುಗಳನ್ನು ಅನಗತ್ಯವಾಗಿ ನೆಗೆಟಿವ್ ವಿವಾದಗಳಿಗೆ ಎಳೆದು ತಂದು, ಮೂಲ ಹೋರಾಟದ ದಿಕ್ಕು ತಪ್ಪಿಸಲು ಕೆಲವು ಕೆಟ್ಟ ಹಿತಾಸಕ್ತಿಗಳು ಷಡ್ಯಂತ್ರ ರೂಪಿಸುತ್ತಿವೆ ಎಂದು ದೂರಿದರು.
ನಿಗೂಢ ಸಾವುಗಳು ಹಾಗೂ FSL ವರದಿ ಉಲ್ಲೇಖ
ರಾಜ್ಯದಲ್ಲಿ ಸಂಭವಿಸುತ್ತಿರುವ ನಿಗೂಢ ಘಟನೆಗಳನ್ನು ಮುಚ್ಚಿಹಾಕಲಾಗುತ್ತಿದೆ ಎಂದು ಆರೋಪಿಸಿದ ಅವರು, “ಒಂದೇ ದಿನದಲ್ಲಿ ಆರು ಜನರು ನಿಗೂಢವಾಗಿ ಸಾವನ್ನಪ್ಪಿದ್ದರೂ ಸುದ್ದಿ ಮಾಡದೆ ಹೂತುಹಾಕಲಾಗಿದೆ. ಈ ಗಂಭೀರ ವಿಷಯದಿಂದ ಗಮನ ಹರಿಸಲು ಬೇರೆ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ,” ಎಂದರು.
ಮುಂದುವರಿದು ಮಾತನಾಡಿದ ಅವರು, “ಇತ್ತೀಚೆಗೆ ಪತ್ತೆಯಾಗಿರುವ ಅಸ್ಥಿಪಂಜರಗಳು ಮತ್ತು ಶವಗಳಿಗೆ DNA ಮ್ಯಾಚ್ ಆಗುತ್ತಿರುವುದು ವಿಧಿವಿಜ್ಞಾನ ಪ್ರಯೋಗಾಲಯದ (FSL) ಅಧಿಕೃತ ವರದಿಯಿಂದ ಸಾಬೀತಾಗಿದೆ. ಮೃತದೇಹಗಳಲ್ಲಿ ಮಹಿಳೆಯರ ಶವಗಳೂ ಸೇರಿವೆ. 22 ವರ್ಷದ ಯುವಕನ ತಲೆಯ ಭಾಗದಲ್ಲಿ ಕೈ ಮತ್ತು ಮೂಳೆಗಳು ಪತ್ತೆಯಾಗಿರುವುದು ಇದು ಸ್ಪಷ್ಟ ಕೊಲೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕಾಣೆಯಾದವರ ಕುಟುಂಬಸ್ಥರ ಸಾಕ್ಷ್ಯಗಳು ನಮ್ಮ ಬಳಿಯಿವೆ. ಇಷ್ಟಿದ್ದರೂ ಇದನ್ನು ‘ಬುರುಡೆ ಗ್ಯಾಂಗ್’ ಎಂದು ಹಗುರವಾಗಿ ಬಿಂಬಿಸಲಾಗುತ್ತಿದೆ,” ಎಂದು ಪ್ರಶ್ನಿಸಿದರು.
SIT ವರದಿ ಬಹಿರಂಗಪಡಿಸಲು ಸರ್ಕಾರದ ಮೇಲೆ ಒತ್ತಡ
ರಾಜ್ಯದಲ್ಲಿ ನಿಗೂಢವಾಗಿ ಕಾಣೆಯಾಗುತ್ತಿರುವವರ ಬಗ್ಗೆ ಸ್ಪಷ್ಟ ದಾಖಲೆಗಳಿವೆ ಎಂದ ಮಟ್ಟಣ್ಣವರ್, ತನಿಖೆಗೆ ಸಂಬಂಧಿಸಿದ SIT ವರದಿಯನ್ನು ಸರ್ಕಾರ ಸಾರ್ವಜನಿಕವಾಗಿ ಏಕೆ ಬಹಿರಂಗಪಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.
“ವರದಿಯನ್ನು ಈಗಾಗಲೇ ಮಹಿಳಾ ಆಯೋಗಕ್ಕೆ ಸಲ್ಲಿಸಲಾಗಿದೆ. ನೇತ್ರಾವತಿ ನದಿಯಲ್ಲಿ ಅಪ್ಪ-ಮಗಳ ಶವಗಳು ಸಿಕ್ಕರೂ ಅವುಗಳನ್ನು ಅನಾಥ ಶವಗಳೆಂದು ದಾಖಲಿಸಿ ಪ್ರಕರಣ ಮುಚ್ಚಿಹಾಕಲಾಗಿದೆ. ತನಿಖೆಯ ಹೆಸರಿನಲ್ಲಿ ಸುಳ್ಳುಗಳನ್ನು ಬರೆದು ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಗೃಹ ಸಚಿವರು ಮತ್ತು ಸರ್ಕಾರ ಈ ಎಲ್ಲಾ ಪ್ರಶ್ನೆಗಳಿಗೆ ತಕ್ಷಣವೇ ಉತ್ತರಿಸಿ, ತನಿಖಾ ವರದಿಯನ್ನು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ದೆಹಲಿಯವರೆಗೂ ಹೋಗಿ ಪ್ರತಿಭಟನೆ ನಡೆಸುತ್ತೇವೆ,” ಎಂದು ಎಚ್ಚರಿಸಿದರು.
‘ರಾಷ್ಟ್ರ ರಕ್ಷಣಾ ಪಡೆ’ ವಿರುದ್ಧ ಬ್ಲಾಕ್‌ಮೇಲ್ ಆರೋಪ
ದೇಶಭಕ್ತಿಯ ಮುಖವಾಡ ಧರಿಸಿ ಕೆಲವು ಸಂಘಟನೆಗಳು ವಸೂಲಿ ದಂಧೆಯಲ್ಲಿ ತೊಡಗಿವೆಯೆಂದು ಮಟ್ಟಣ್ಣವರ್ ಗಂಭೀರ ಆರೋಪ ಮಾಡಿದರು. “ರಾಷ್ಟ್ರ ರಕ್ಷಣಾ ಪಡೆ ಹೆಸರಿನಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಅವರ ತಂಡ ಬ್ಲಾಕ್‌ಮೇಲ್ ಹಾಗೂ ವಸೂಲಿ ದಂಧೆ ನಡೆಸುತ್ತಿದೆ. ಚಕ್ರವರ್ತಿ ಸೂಲಿಬೆಲೆ ಹಾಗೂ ಗಿಳಿಯಾರ್ ಅವರಂತಹ ವ್ಯಕ್ತಿಗಳು ಇವರಿಗೆ ಬೆಂಬಲವಾಗಿ ನಿಂತಿದ್ದಾರೆ. ಗೋ ರಕ್ಷಣೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದಂಧೆ ನಡೆಯುತ್ತಿದ್ದು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಇವರ ವಿರುದ್ಧ ಗೃಹ ಸಚಿವರು ಮತ್ತು ಪೊಲೀಸ್ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
ಸೌಜನ್ಯ ಪ್ರಕರಣದ ಮರುತನಿಖೆಗೆ ಪುನರುಚ್ಚಾರ
ವರ್ಷಗಳ ಹಿಂದೆ ದೇಶಾದ್ಯಂತ ಸದ್ದು ಮಾಡಿದ್ದ ಸೌಜನ್ಯ ಕೊಲೆ ಪ್ರಕರಣಕ್ಕೆ ಮರುಜೀವ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
“ದೆಹಲಿಯಲ್ಲಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೋರಿ ಹೋರಾಟ ತೀವ್ರಗೊಳ್ಳುತ್ತಿರುವಾಗ, ಪ್ರಕಾಶ್ ರಾಜ್ ಹಾಗೂ ರಮಾ ನಾಗರಾಜ್ ಅವರ ಹೆಸರುಗಳನ್ನು ತಂದಿರುವುದು ಹೋರಾಟವನ್ನು ಹಳ್ಳ ಹಿಡಿಸುವ ಕುತಂತ್ರ. ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ದಕ್ಷ ಅಧಿಕಾರಿಗಳನ್ನೊಳಗೊಂಡ ನೂತನ SIT ರಚಿಸಬೇಕು. ಈ ಮೂಲಕ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು,” ಎಂದು ಸರ್ಕಾರದ ಗಮನ ಸೆಳೆದರು.