ಜೂನ್ 19ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ‘ದೊಡ್ಮನ್ಸ’ ಚಿತ್ರ
ದಾವಣಗೆರೆ, ಜೂ. 6: ಆಟೋರಿಕ್ಷಾ ಚಾಲಕನೊಬ್ಬ ತನ್ನ ಒಳ್ಳೆಯ ಗುಣಗಳು ಹಾಗೂ ದೊಡ್ಡ ಮನಸ್ಸಿನ ಮೂಲಕ ಉನ್ನತ ಸ್ಥಾನಕ್ಕೇರುವ ಕಥಾವಸ್ತುವನ್ನು ಹೊಂದಿರುವ ‘ದೊಡ್ಮನ್ಸ’ ಕನ್ನಡ ಚಲನಚಿತ್ರವು ಜೂನ್ 19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ಶರತ್ ಕೃಷ್ಣ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಹಾಗೂ ಮಧ್ಯ ಕರ್ನಾಟಕ ಭಾಗದ ಜನರು ಕನ್ನಡ ಚಿತ್ರರಂಗಕ್ಕೆ ಮೊದಲಿನಿಂದಲೂ ಅಪಾರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಅನೇಕ ಕನ್ನಡ ಚಿತ್ರಗಳು ಇಲ್ಲಿ ಶತದಿನೋತ್ಸವ ಆಚರಿಸಿರುವ ಇತಿಹಾಸವಿದೆ. ಬೆಣ್ಣೆಯಂತಹ ಮನಸ್ಸಿನ ದಾವಣಗೆರೆ ಜನರು ತಮ್ಮ ಚಿತ್ರಕ್ಕೂ ಬೆಂಬಲ ನೀಡುವ ವಿಶ್ವಾಸವಿದೆ ಎಂದು ಹೇಳಿದರು.
“ದುಡ್ಡಿದ್ದವನಲ್ಲ ಗುರು ದೊಡ್ಡ ಮನುಷ್ಯ, ದೊಡ್ಡ ಮನಸು ಇರೋನೇ ದೊಡ್ಮನ್ಸ” ಎಂಬ ಟ್ಯಾಗ್‌ಲೈನ್‌ನೊಂದಿಗೆ ನಿರ್ಮಾಣಗೊಂಡಿರುವ ಈ ಚಿತ್ರ ಅಪ್ಪಟ ಕನ್ನಡದ ಸೊಗಡನ್ನು ಹೊಂದಿದೆ. ಹೊಸ ಪ್ರತಿಭೆಗಳ ಸಮೂಹದೊಂದಿಗೆ ಮೂಡಿಬಂದಿರುವ ಚಿತ್ರವು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದರ ಜೊತೆಗೆ ಮನರಂಜನೆಯ ಅಂಶಗಳನ್ನೂ ಒಳಗೊಂಡಿದೆ ಎಂದು ಹೇಳಿದರು.
‘ದೊಡ್ಮನ್ಸ’ ತಮ್ಮ ಅಭಿನಯ ಹಾಗೂ ನಿರ್ದೇಶನದ ಮೊದಲ ಚಿತ್ರವಾಗಿದೆ. ಮೂಲತಃ ತಾವು ನಿರ್ದೇಶಕರಾಗಿ ಮಾತ್ರ ಕಾರ್ಯನಿರ್ವಹಿಸಲು ಬಯಸಿದ್ದರೂ, ಸೂಕ್ತ ಕಲಾವಿದರ ಆಯ್ಕೆಯಲ್ಲಿ ಎದುರಾದ ಸಮಸ್ಯೆಯಿಂದ ನಾಯಕನ ಪಾತ್ರವನ್ನೂ ತಾವೇ ನಿರ್ವಹಿಸಬೇಕಾಯಿತು ಎಂದು ತಿಳಿಸಿದರು.
ಚಿತ್ರವು ಯಾವುದೇ ಮಲಯಾಳಂ, ತಮಿಳು ಅಥವಾ ತೆಲುಗು ಚಿತ್ರಗಳ ಪ್ರಭಾವವಿಲ್ಲದೆ ಸಂಪೂರ್ಣ ಕನ್ನಡತನವನ್ನು ಪ್ರತಿಬಿಂಬಿಸುತ್ತದೆ. ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕನ್ನಡಿಗರು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಹೊಸಬರ ಪ್ರಯತ್ನಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಹಿರಿಯ ನಿರ್ದೇಶಕ ಎಸ್. ನಾರಾಯಣ್ ಅವರು ಈ ಕಥೆಯನ್ನು ದಿವಂಗತ ನಟ ಡಾ. ವಿಷ್ಣುವರ್ಧನ್ ಅವರಿಗಾಗಿ ರೂಪಿಸಿದ್ದರು. ಕೆಲವು ಕಾರಣಗಳಿಂದ ಚಿತ್ರ ನಿರ್ಮಾಣವಾಗಿರಲಿಲ್ಲ. ಅಂತಹ ಮಹಾನ್ ನಟರು ಅಭಿನಯಿಸಬೇಕಾಗಿದ್ದ ಕಥೆಯಲ್ಲಿ ತಾವೇ ನಟಿಸಿ ನಿರ್ದೇಶನ ಮಾಡುವ ಅವಕಾಶ ದೊರೆತಿರುವುದು ಬಯಸದೇ ಬಂದ ಭಾಗ್ಯ ಎಂದು ಶರತ್ ಕೃಷ್ಣ ಹೇಳಿದರು.
ಚಿತ್ರದ ನಾಯಕಿ ರೇಶ್ಮ ಮಾತನಾಡಿ, ‘ದೊಡ್ಮನ್ಸ’ ತಮ್ಮ ಎರಡನೇ ಚಿತ್ರವಾಗಿದ್ದು, ಈ ಹಿಂದೆ ‘ಲವ್ ಯು ಮುದ್ದು’ ಚಿತ್ರದಲ್ಲಿ ನಟಿಸಿದ್ದೇನೆ. ಉತ್ತಮ ಕಥೆಯನ್ನು ವಾಣಿಜ್ಯಾತ್ಮಕವಾಗಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಇದಾಗಿದೆ. ಕನ್ನಡಿಗರು ಚಿತ್ರವನ್ನು ಆಶೀರ್ವದಿಸಿ ಚಿತ್ರಮಂದಿರಗಳಲ್ಲಿ ವೀಕ್ಷಿಸಬೇಕು ಎಂದು ಮನವಿ ಮಾಡಿದರು.
ನಟಿ ಶಿಲ್ಪ ಮಾತನಾಡಿ, ಚಿತ್ರದಲ್ಲಿ ಅಲ್ಪ ಸಮಯ ಕಾಣಿಸಿಕೊಂಡರೂ ಮಹತ್ವದ ಪಾತ್ರ ನಿರ್ವಹಿಸಿರುವ ತೃಪ್ತಿ ಇದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ದಾವಣಗೆರೆ ಜಿಲ್ಲಾ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಮನು ಎಂ. ದೇವನಗರಿ, ಕರ್ನಾಟಕ ಸೇವಾರತ್ನ ಪ್ರಶಸ್ತಿ ಪುರಸ್ಕೃತ ಹನುಮಂತ ಹೆಚ್.ವೈ., ಕರ್ನಾಟಕ ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಅಸೋಸಿಯೇಷನ್ ರಾಜ್ಯ ಕಾರ್ಯಾಧ್ಯಕ್ಷ ಕೊಂಡಜ್ಜಿ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಕೆ. ದೇವೇಂದ್ರಪ್ಪ, ಕಾರ್ಯದರ್ಶಿ ಡಿ. ರಂಗನಾಥ್, ಚಂದ್ರಮೌಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜೂನ್ 19ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ‘ದೊಡ್ಮನ್ಸ’ ಚಿತ್ರ
24